ನೆಲ್ಯಾಡಿ,: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಚಲಿಸುತ್ತಿರುವ ಲಾರಿಯಿಂದ ಜಿಗಿದು ನಿರ್ವಾಹಕ ಸಾವನ್ನಪ್ಪಿದ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮೃತನನ್ನು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಚೆನ್ನತೂಬೂರು ನಿವಾಸಿ ಲಕ್ಷ್ಮಣನ್ ಸೆಂಗುತ್ತುವನ್ (46) ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿ ಗುಂಡ್ಯ ಸಮೀಪದ ಅಡ್ಡಹೊಳೆ ತಲುಪಿದಾಗ, ಏಕಾಏಕಿಯಾಗಿ ನಿರ್ವಾಹಕ ಲಾರಿಯಿಂದ ಜಿಗಿದು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸ್ಥಳೀಯರು ಮತ್ತು ಲಾರಿ ಚಾಲಕ ಅವನನ್ನು ರಕ್ಷಿಸಲು ಪ್ರಯತ್ನಿಸಿದ್ದರೂ, ತೀವ್ರ ಗಾಯಗಳಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಮೃತ ದೇಹವನ್ನು ಪುತ್ತೂರಿನ ಶವಗಾರಕ್ಕೆ ಕೊಂಡೊಯ್ಯಲಾಗಿದ್ದು, ಈ ಘಟನೆ ಸಂಬಂಧ ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ಆದರೆ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.
